ಗುರುವಾರ, ಜನವರಿ 27, 2011

ಅಜ್ಜ ಅಜ್ಜಿಯ ಸವಿನೆನಪಲ್ಲಿ....

ಉಡುಪಿಯಿಂದ ೧೦-೧೨ ಕಿಲೋಮೀಟರು ದೂರದಲ್ಲಿ ಕೆಮ್ಮಣ್ಣು ಎಂಬ ಹಳ್ಳಿ ಇದೆ. ಆ ಹಳ್ಳಿಯ ಒಂದು ಬದಿಯಲ್ಲಿ ಸ್ವರ್ಣ ನದಿ ಹರಿಯುತ್ತದೆ. ಇನ್ನೊಂದು ಬದಿಯಲ್ಲಿ ಅರಬ್ಬೀ ಸಮುದ್ರ. ಈ ಸ್ವರ್ಣ ನದಿಯ ಮಧ್ಯ ಭಾಗದಲ್ಲಿ ಕೆಲವು ದ್ವೀಪಗಳಿವೆ. ಅಂತಹ ಒಂದು ದ್ವೀಪದಲ್ಲಿ ನನ್ನ ಅಜ್ಜ ಅಜ್ಜಿ ವಾಸಿಸುತ್ತಿದ್ದರು. ಈ ದ್ವೀಪದ ಸುತ್ತಮುತ್ತ ಎಲ್ಲಿ ನೋಡಿದರೂ ತೆಂಗಿನ ಮರಗಳೇ ಕಾಣ್ತವೆ. ರಜೆ ಸಿಕ್ಕಿದ ಕೂಡಲೇ ಅಜ್ಜ ನಮ್ಮನ್ನು ಕರೆದುಕೊಂಡು ಹೋಗಲ್ಲಿಕ್ಕೆ ಬರುತ್ತಿದ್ದರು. ಬಸ್ಸಿನಿಂದ ಇಳಿದ ಕೂಡಲೇ ತುಂಬಾ ನದಿಯಲ್ಲಿಕ್ಕೆ ಉಂಟು. ದಾರಿ ಉದ್ದಕ್ಕೂ ಬೆಲ್ಲದ ಕ್ಯಾಂಡಿ, ಅಕರುಟ್ ಮುಂತಾದವುಗಳನ್ನು ತೆಗೆಸಿ ಕೊಡುತಿದ್ದರು. ಅದನ್ನು ತಿನ್ನುತಾ ದಾರಿ ಸಾಗಿದ್ದೆ ಗೊತ್ತಗುತಿರಲ್ಲಿಲ್ಲ. ನದಿ ತೀರದಲ್ಲಿ ಅಜ್ಜನ ದೋಣಿ ನಮಗಾಗಿ ಕಾದಿರುತ್ತಿತ್ತು. ಅದರಲ್ಲಿ ಕೂತುಕೊಂಡು ಹೊಳೆದಾಟಿ ಅಜ್ಜಿ ಮನೆಗೆ ತಲುಪುತಿದ್ದೆವು.

ಅಜ್ಜಿ ಮನೆಯಲ್ಲಿ ಮಕ್ಕಳ ಒಂದು ಗುಂಪೇ ಇರುತ್ತಿತ್ತು. ಆ ದ್ವೀಪದಲ್ಲಿ ಅದೊಂದೇ ಮನೆಯಲ್ಲ. ಅಂತಹ ೪-೫ ಮನೆಗಳು ಇವೆ. ಅಲ್ಲಿಯ ಮಕ್ಕಳು ಕೂಡ ಆಟ ಆಡಲು ಸೇರುತ್ತಿದ್ದರು. ಬೆಳಗಿನ ತಿಂಡಿಯ ನಂತರ ನಾವೆಲ್ಲಾ ಆಡಲ್ಲಿಕ್ಕೆ ಸುರು. ಮನೆಯ ಎದುರು ಭಾಗದಲ್ಲಿ ಉದ್ದನೆಯ ತೋಡು. ನದಿ ನೀರು ಇದರಲ್ಲಿ ಸೇರುತ್ತಿತ್ತು.  ತೋಡು ದಾಟಿ ಹೋಗಲು ತೆಂಗಿನ ಮರವನ್ನು ಕತ್ತರಿಸಿ ಬ್ರಿಡ್ಜ್ ತರಹ ಇಟ್ಟಿದ್ದರು. ಅಂತಹ ೨ ತೋಡು  ದಾಟಿದ ನಂತರ ನಾವೆಲ್ಲಾ ಆಟ ಆಡುವ ಜಾಗ ಸಿಗ್ತ್ತದೆ. ತೋಡಿನ ಒಂದು ಬದಿಯಲ್ಲಿ ಹೊಂಗೆ ಮರಗಳ ಸಾಲಿದೆ. ಈ ಹೊಂಗೆ ಮರಗಳ ಬುಡದಲ್ಲೇ ನಮ್ಮ ಮನೆ ಆಟ ಆಡ್ತ್ತಿದ್ದೆವು. ಕಲ್ಲುಗಳನ್ನು ಸೇರಿಸಿ ಓಲೆ ಸಿದ್ದವಾಗುತ್ತಿತ್ತು. ತೋಟದಲ್ಲಿ ಸಿಗುವ ಮಾವಿನ ಕಾಯಿಗಳನ್ನು ತಂದು ಕತ್ತರಿಸಿ ಉಪ್ಪು ಖಾರ ಬೆರೆಸಿ ಉಪ್ಪಿನ ಕಾಯಿ ಸಿದ್ದ. ಅದನ್ನು ಹೊಂಗೆ ಎಲೆಯಲ್ಲಿ ಹಂಚಿ ಮರದ ಮೇಲೆ ಕೂತುಕೊಂಡು ಚಪ್ಪರಿಸಿ ತಿನ್ನುತ್ತಿದ್ದೆವು.

ನದಿಯಲ್ಲಿ ನೀರು ಕಡಿಮೆ ಆದಾಗ ಅಲ್ಲಲ್ಲಿ ಮರಳು ಕಾಣಿಸ್ತದೆ. ನಾವೆಲ್ಲಾ ಅಲ್ಲಿಗೆ ಹೋಗಿ ಬಕೆಟ್ ತುಂಬಾ ಮಾರುವಾಯಿ ತುಂಬಿಸಿ ತರುತ್ತಿದ್ದೆವು. ಅಜ್ಜಿ ಅದರಿಂದ ಮರುವಾಯಿ ಸುಕ್ಕ ತಯಾರು ಮಾಡುತ್ತಿದ್ದರು. ಮಕ್ಕಳೆಲ್ಲ ಅದನ್ನೇ ತಟ್ಟೆಯಲ್ಲಿ ತುಂಬಿಸಿ ತಿನ್ನುತ್ತಿದ್ದೆವು. ಸಾಯಂಕಾಲವಾಗ್ತಲೇ ನದಿ ತೀರದಲ್ಲಿ ಅಡ್ಡವಾಗಿ ಬೆಳೆದ ತೆಂಗಿನ ಮರ ಹತ್ತಿ ನದಿಯಲ್ಲಿ ಸಾಗುವ ದೋಣಿಗಳನ್ನು ನೋಡುತ್ತಾ ಕಾಲ ಸಾಗುತ್ತಿತ್ತು. ಹುಡುಗರೆಲ್ಲ ಗಾಳಕ್ಕೆ ಎರೆ ಹುಳ ಸಿಕ್ಕಿಸಿ ಮೀನು ಹಿಡಿಯುತ್ತಿದ್ದರು. ರಜೆ ಮುಗಿದದ್ದೇ ಗೊತ್ತಾಗುತ್ತಿರಲಿಲ್ಲ.
ಅಜ್ಜನ ಮನೆಯಲ್ಲಿ ಕಳೆದಂತಹ ಸವಿ ನೆನಪುಗಳು ಮಾತ್ರ ಯಾವತ್ತು ಮಾಸುವುದಿಲ್ಲ.

1 ಕಾಮೆಂಟ್‌: